ದಾನ 2 

ದಾನವೆಂದರೆ ಕೊಡುಗೆ; ಒಬ್ಬ ತನ್ನ ಆರ್ಜನೆಯಲ್ಲಿನ ಸ್ವಲ್ಪ ಭಾಗವನ್ನು ಇತರರಿಗೆ ಕೊಡುವುದು. ಈ ಕೊಡುಗೆ ಬುದ್ಧಿಪೂರ್ವಕವಾದದೂ ಪ್ರೀತಿಯಿಂದ ಕೂಡಿದುದೂ ಆಗಿರಬೇಕು. ಕೊಟ್ಟ ವಸ್ತುವನ್ನು ಪುನಃ ತನ್ನ ಬಳಕೆಗಾಗಿ ದಾನಿ ಬಯಸುವಂತಿಲ್ಲ. ಅದನ್ನು ಪಡೆಯಲೂ ಬಾರದು. ದಾನ ಕಾರ್ಯ ಯಾರಿಗೂ ಗೋಚರವಾಗಬಾರದ ರಹಸ್ಯ; ಪ್ರಕಟ ವ್ಯಾಪಾರವಲ್ಲ.

ಸಮಾಜದ ಜೀವನದಲ್ಲಿ ಸುಖಬಾಳ್ವೆಯ ಉಪಕರಣಗಳು ಜನರಲ್ಲಿ ಒಂದೇ ಮಟ್ಟದಲ್ಲಿ ಹಂಚಿಕೆಯಾಗಿರುವುದಿಲ್ಲ. ಅಪರಿಹಾರ್ಯವಾದ ರೀತಿಯಲ್ಲಿ ಆ ಹಂಚಿಕೆಯಲ್ಲಿ ವೈಷಮ್ಯ ಕಂಡು ಬರುತ್ತದೆ. ಅದರಿಂದ ಈಷ್ರ್ಯೆ, ಅಸೂಯೆ, ಕಾರ್ಪಣ್ಯಗಳು ಉದ್ಭವಿಸಿ ವ್ಯಕ್ತಿಶಾಂತಿಗೂ ಸಮಾಜ ಶಾಂತಿಗೂ ಅಡಚಣೆಯುಂಟಾಗುತ್ತದೆ. ಆ ಕಾರಣದಿಂದ ಶಾಂತಿ ಬಯಸುವ ಪ್ರತಿಯೊಬ್ಬನೂ ತನ್ನಲ್ಲಿರುವುದನ್ನು ಪರರ ಪಾಲಿಗೆ ಒಪ್ಪಿಸಿ ತನ್ನ ನೆಮ್ಮದಿಯನ್ನು ಉಳಿಸಿಕೊಳ್ಳಬೇಕು.

ಬಡವ ಬಲ್ಲಿದನೆಂಬ ಭೇದವಿಲ್ಲದೆ ಸಮಸ್ತ ಜನರೂ ದಾನ ಕರ್ಮವನ್ನು ಆಚರಿಸಬೇಕು. ದಾನ ಮಾಡುವ ಯೋಗ್ಯತೆ ಪಡೆಯದವನನ್ನು ಜಗತ್ತಿನಲ್ಲಿ ಕಾಣಲಾಗುವುದಿಲ್ಲ. ತಿರುಪೆಯಿಂದ ಉಸಿರಾಡುವವನೂ ತನ್ನ ಲಭ್ಯದಲ್ಲಿ ಸ್ವಲ್ಪ ಭಾಗವನ್ನು ದಾನವಾಗಿ ಕೊಡಬಲ್ಲ. ಇದು ಒಂದು ವಿಲಕ್ಷಣ ಸಂಸ್ಕಾರ.

ದಾನಪ್ರತಿಗ್ರಹಕ್ಕೆ ಅಭ್ಯರ್ಥಿಗಳೆಲ್ಲರೂ ಸಹಜವಾಗಿ ಅರ್ಹರಾಗುತ್ತಾರೆ. ಆದರೂ ಪ್ರತಿಗ್ರಹಕ್ಕೆ ಕೆಲವು ನಿಯಮಗಳು ವಿಹಿತವಾಗಿವೆ. ಆಶ್ರಮ ಚತುಷ್ಟಯದಲ್ಲಿ ಲೋಕ ಸೇವೆಗೆ ಅತಿಮುಖ್ಯವಾದುದು ಗೃಹಸ್ಥನ ಆಶ್ರಮ ಸಮಾಜಸೇವೆಗೆ, ಯಾಗ ಹೋಮಗಳ ಮೂಲಕ ದೇವತೆಗಳ ಸೇವೆಗೆ ಸತಿಸಹಿತನಾದ ಪತಿ ಮುಖ್ಯಾಧಿಕಾರಿಯಾಗುತ್ತಾನೆ. ಅವನು ಶ್ರೋತ್ರೀಯನಾಗಿ, ಕುಟುಂಬಿಯಾಗಿ ದರಿದ್ರನಾಗಿದ್ದರೆ ಪ್ರತಿಗ್ರಹಕ್ಕೆ ಅರ್ಹತೆ ಹೊಂದುತ್ತಾನೆ. ಅವನಿಗೆ ಕೊಡುವ ದಾನ ಸಾರ್ಥಕವಾಗುತ್ತದೆ. ಅವನು ದಾನಿಗೆ ಯಾವ ರೀತಿಯಲ್ಲಿಯೂ ಬಂಧುವಾಗಿರಕೂಡದು. ಇಲ್ಲವಾದರೆ ಕೊಡುಗೆ ದಾನದ ಉನ್ನತ ಮಟ್ಟವನ್ನು ಮುಟ್ಟಲಾರದು.
ಪ್ರತ್ಯಕ್ಷ ಗೋಚರವಾಗದ ದೇವತಾದಿಗಳಿಗೆ ನೇರವಾಗಿ ದಾನ ಕೊಡಲಾಗದುದರಿಂದ ಅವರಿಗೆ ಅಗ್ನಿ ಮುಂತಾದ ದೂತರ ಮೂಲವಾಗಿ ದಾನಸಮರ್ಪಣೆ ಮಾಡುವುದು ವೈದಿಕಕಲ್ಪಕ್ರಮ. ಅದನ್ನು ಯಾಗ ಅಥವಾ ತ್ಯಾಗ ಎಂಬುದಾಗಿ ಭಾವಿಸುವುದು ವಾಡಿಕೆ.

ದಾನ ಮಾಡುವುದಕ್ಕೆ ಕಾಲ ದೇಶ ನಿಮಿತ್ತಗಳು ಆವಶ್ಯಕ. ಅವು ವಿಹಿತವಾಗಿದ್ದಲ್ಲಿ ದಾನಿಗೆ ಬಯಸಿದ ಫಲ ಖಂಡಿತವಾಗಿ ದೊರೆವುದರಲ್ಲಿ ಯಾವ ಸಂಶಯವೂ ಇಲ್ಲ.

ದಾನದಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಅದರ ಸ್ವರೂಪ. ಕೊಡುಗೆಯ ಕಾಲದಲ್ಲಿ ನಮ್ಮಲ್ಲಿ ಮೂಡುವ ಭಾವನೆಯನ್ನು ಅವಲಂಬಿಸಿ ದಾನದಲ್ಲಿ ಸಾತ್ತ್ವಿಕ, ರಾಜಸ ಮತ್ತು ತಾಮಸ ಎಂದು ಮೂರು ಬಗೆಗಳು ಏರ್ಪಡುತ್ತವೆ. ಫಲಾಭಿಸಂಧಿಯಿಲ್ಲದೆ ದಾನತತ್ಪರತೆಯಿಂದ, ಯಾವ ರೀತಿಯಲ್ಲೂ ತನಗೆ ಉಪಕಾರವನ್ನು ಎಸಗದ ಶ್ರೋತ್ರೀಯನಿಗೆ ವಿಹಿತ ಕ್ರಮದಲ್ಲಿ ಭಕ್ತಿಪೂರ್ವಕವಾಗಿ ನೀಡುವ ಕೊಡುಗೆ ಸಾತ್ವೀಕ ದಾನ. ತನ್ನ ಹಿರಿಮೆ ವೈಭವಗಳನ್ನು ಪ್ರಕಾಶಪಡಿಸುವ ಉದ್ದೇಶದಿಂದ ಪ್ರತ್ಯುಪಕಾರದಲ್ಲಿ ಅಭಿಲಾಷೆಯಿಟ್ಟುಕೊಂಡು ನೀಡುವ ಕೊಡುಗೆ ರಾಜಸ. ಯಾವ ವ್ಯವಸ್ಥೆಯೂ ಚಿತ್ತಶುದ್ಧಿಯೂ ಇಲ್ಲದೆ, ಕೊಡಬೇಕಾದ ಒತ್ತಡಕ್ಕೆ ಸಿಕ್ಕಿಕೊಂಡು ಬಲಾತ್ಕಾರಕ್ಕೆ ತುತ್ತಾಗಿ ಕೊಡುವ ಕೊಡುಗೆ ತಾಮಸ ದಾನ. ಅದು ನಿಜವಾಗಿಯೂ ದಾನವೇ ಅಲ್ಲ.

ದಾನದಲ್ಲಿ ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ ಎಂದು ಮೂರು ವಿಧ. ಪ್ರತಿದಿನವೂ ಫಲಾಪೇಕ್ಷೆಯಿಲ್ಲದೆ ಮಾಡುವುದು ನಿತ್ಯದಾನ. ಪವಿತ್ರತೀರ್ಥಕ್ಷೇತ್ರಗಳಲ್ಲಿ ಮತ್ತು ಪುಣ್ಯ ಪರ್ವ ದಿನಗಳಲ್ಲಿ ಸಂಚಿತ ಪಾಪನಿವೃತ್ತಿಗಾಗಿ ಮಾಡುವ ದಾನ ನೈಮಿತ್ತಿಕ. ಅದೇ ಸಂದರ್ಭಗಳಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ದಾನ ಕಾಮ್ಯರೂಪವನ್ನು ತಾಳುತ್ತದೆ. ಇದಲ್ಲದೆ ವಿಮಲದಾನವೆಂಬ ಮತ್ತೊಂದು ಬಗೆಯುಂಟು. ಪರಮ ಪವಿತ್ರನಾದ ಪರಮೇಶ್ವರ ಶ್ರೀಮಹಾವಿಷ್ಣುವಿಗೆ ಸ್ವಯಂಪ್ರಯೋಜನವಾಗಿ ಮಾಡಿದ ದಾನ ಸಮರ್ಪಣೆ ಅಮಿತ ಅತುಳ ಫಲಪ್ರದವಾಗಿ ಪರಿಣವಿಸುತ್ತದೆ. ವಾಮನನಿಗೆ ಮೂರಡಿ ನೆಲವನ್ನು ನೀಡಿದ ಬಲೀಂದ್ರನ ಹಿರಿಮೆ ಶ್ರುತಿ ಮತ್ತು ಪುರಾಣಪ್ರಸಿದ್ಧವಾಗಿದೆ.

ನಮ್ಮ ಕೊಡುಗೆ ನಮ್ಮದೇ ಆಗಿರಬೇಕು. ನ್ಯಾಯಾರ್ಜಿತೇನ ವಿತ್ತೇನ- ಎಂಬ ಒತ್ತಾಯವನ್ನು ಕಡೆಗಣಿಸುವಂತಿಲ್ಲ. ದಾನಕ್ಕೆ ಅನರ್ಹವಾದ ವಸ್ತುವಿಲ್ಲದಿದ್ದರೂ ದಾನಿದಾನೀಯರಿಗೆ ಪ್ರಿಯತಮವಾದುದು ಪ್ರಶಸ್ತ ದಾನವಾಗುತ್ತದೆ. ವೇದಾನ್ತಿಗಳಲ್ಲಿ ಪ್ರಪತ್ತಿಮಾರ್ಗಾವಲಂಬಿಗಳು ಶರಣ್ಯನಾದ ಸರ್ವೇಶ್ವರನಿಗೆ ಸ್ವಾತ್ಮ ಸಮರ್ಪಣೆಯೆಂಬ ವಿಮಲದಾನಪರರಾಗಿ ತಮ್ಮ ಪುರುಷಾರ್ಥ ಸಿದ್ಧಿಯನ್ನು ಪಡೆಯುತ್ತಾರೆ.

ಭಾರತೀಯ ಧರ್ಮದಲ್ಲಿ ಹೇಗೋ ಹಾಗೆ ಇಸ್ಲಾಂ, ಕ್ರೈಸ್ತ, ಯಹೂದಿ ಮೊದಲಾದ ಎಲ್ಲ ವಿಶ್ವಧರ್ಮಗಳಲ್ಲೂ ದಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.										(ವಿ.ಟಿ.ಟಿ.ಎನ್.)

ಆಸ್ತಿಯನ್ನು ಅಥವಾ ಯಾವುದೇ ವಸ್ತುವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನೈತಿಕವಾಗಿ ಹಸ್ತಾಂತರಿಸುವ ವಾಡಿಕೆ ಎಲ್ಲ ದೇಶಗಳಲ್ಲೂ ಹಿಂದೆ ಇತ್ತು. ಇಂಗ್ಲೆಂಡಿನಲ್ಲಿ ಭೂಮಿಯನ್ನು ಒಬ್ಬನಿಂದ ಇನ್ನೊಬ್ಬನಿಗೆ ಮೌಖಿಕ ದಾನದಿಂದ ಹಸ್ತಾಂತರಿಸಿ ಸ್ವಾಧೀನ ಹೊಂದಲಿಕ್ಕೆ ಕಾಯದೆಯಲ್ಲಿ ಅವಕಾಶವಿತ್ತು. ಮೋಸಗಾರಿಕೆ ಹೆಚ್ಚಿದಂತೆ ಇಂಥ ಎಲ್ಲ ಕ್ರಮಗಳೂ ಬರೆಹದಲ್ಲಿ ಆಗಬೇಕಾಯಿತು ಮತ್ತು ಅನಂತರದ ಕಾಯದೆಗಳಂತೆ ಅವು ಕರಾರುಗಳ ಮೂಲಕ ಆಗಬೇಕಾಯಿತು.

ಮೌಖಿಕ ದಾನದಿಂದ ಚರವಸ್ತುಗಳನ್ನು ಪರಿಣಾಮಕಾರಿಯಾಗಿ ಹಸ್ತಾಂತರಿಸಬಹುದು. ಆದರೆ ದಾನಿಯಿಂದ ವಸ್ತು ಧಾರಣಮಾಡುವವನಿಗೆ ಪ್ರತ್ಯಕ್ಷವಾಗಿ ಹಸ್ತಾಂತರಿಸಲ್ಪಡುವವರಿಗೆ ಬರೇ ಮೌಖಿಕ ದಾನ ದಾನಿಯ ಮನೋಗತವನ್ನು ಕಾಯದೆಯಂತೆ ಪೂರೈಸಲಾರದು. ಆ ದಾತೃಧಾರಕರು ಪಕ್ಷಿ ಪ್ರತಿಪಕ್ಷಿಗಳಾಗಿ ಬಂದ ತೀರ್ಮಾನಕ್ಕೆ ಬೆಲೆಯಿರಲಾರದು. ಆದರೆ ಸ್ವಾಧೀನತೆಯನ್ನು ಇಟ್ಟುಕೊಂಡೂ ವಿಶ್ವಸ್ತತೆಯ ಘೋಷಣೆ ವಿಹಿತ.

ಪ್ರತ್ಯಕ್ಷವಾಗಿ ಹಸ್ತಾಂತರಿಸಲಾಗದ ಪರಿಸ್ಥಿತಿಯಿರುವಾಗ ದಾನ ಧಾರಕ ಮಾಲಿಕನಂತೆ ವ್ಯವಹರಿಸಲನುಕೂಲವಾಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ಅವಶ್ಯ. ಈ ಸಂದರ್ಭದಲ್ಲಿ, ಒಂದು ವಖಾರಿಯ ಬೀಗದ ಕೈಯನ್ನು ಕೊಡುವುದರಿಂದ ಹಸ್ತಾಂತರಿಸಲಾಗದ ವಸ್ತುವನ್ನು ಮೌಖಿಕವಾಗಿ ದಾನಮಾಡಿದಂತಾಗುವುದೆಂಬ ಉದಾಹರಣೆಯನ್ನು ಕೊಡಬಹುದು. ಚರವಸ್ತುವಲ್ಲದ ಅಥವಾ ಪ್ರತ್ಯಕ್ಷವಾಗಿ ಹಸ್ತಾಂತರಿಸಲಾಗದ ಸ್ವಾತಿಯ ದಾನ ಯೋಗ್ಯ ಬರೆಹದ ಮೂಲಕವೇ ಆಗಬೇಕಾಗುತ್ತದೆ.
(ಡಿ.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ